ಶ್ರೀಪಾದರಾಜ
	ಸು. 1450. ಪ್ರಸಿದ್ಧ ಹರಿದಾಸರು. ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ. ಇವರ ತಂದೆ ಶೇಷಗಿರಿ ಆಚಾರ್ಯ, ತಾಯಿ ಗಿರಿಯಮ್ಮ. ಇವರ ಬಾಲ್ಯ, ವಿದ್ಯಾಭ್ಯಾಸ ಇತ್ಯಾದಿ ವಿಷಯಗಳ ಬಗ್ಗೆ ನಿಖರವಾಗಿ ತಿಳಿಯದು. ಪರಂಪರಾಗತವಾಗಿ ಪ್ರಚುರವಾಗಿರುವ ಕೆಲವು ಅಭಿಪ್ರಾಯಗಳನ್ನು ಈ ರೀತಿ ಕ್ರೋಡೀಕರಿಸಬಹುದು: 

	ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ಬಳಿಯಿರುವ ಅಬ್ಬೂರಿನವರು. ಒಮ್ಮೆ ಶ್ರೀರಂಗದ ಸ್ವರ್ಣವರ್ಣತೀರ್ಥ ರೆಂಬ ಮಠಾಧಿಪತಿಗಳು ಅಬ್ಬೂರಿನ ಮಠಾಧಿಪತಿಗಳಾಗಿದ್ದ ಪುರುಷೋತ್ತ ಮತೀರ್ಥರ ಸಂದರ್ಶನಕ್ಕಾಗಿ ಬಂದಾಗ, ಬಾಲಕ ಲಕ್ಷ್ಮೀನಾರಾಯಣನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಅವನನ್ನೂ ಅವನ ತಂದೆತಾಯಿಗಳನ್ನೂ ಶ್ರೀರಂಗಕ್ಕೆ ಕರೆತಂದರು. ಮುಂದೆ ಶ್ರೀರಂಗದಲ್ಲೇ ಲಕ್ಷ್ಮೀನಾರಾಯಣನ ವಿದ್ಯಾಭ್ಯಾಸ ಮುಗಿದು, ವಿದ್ಯಾಗುರುಗಳಾದ ಸ್ವರ್ಣವರ್ಣತೀರ್ಥರೇ ಅವನಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ತಮ್ಮ ಸಂಸ್ಥಾನದ ಉತ್ತರಾಧಿ ಕಾರಿಯನ್ನಾಗಿ ನಿರ್ಧರಿಸಿದರು. ರಾಯರ ಮಠದ ಪರಂಪರೆಗೆ ಸೇರಿದ ವಿಭುದೇಂದ್ರತೀರ್ಥರಲ್ಲಿ ಅವನ ವೇದಾಂತ ವ್ಯಾಸಂಗ ನಡೆಯಿತು. ಆ ಬಾಲಕನ ವಿದ್ವತ್ತನ್ನು ಪರೀಕ್ಷಿಸುವ ಅವಕಾಶ ದೊರೆತ ಅಂದಿನ ಉತ್ತರಾದಿಮಠದ ರಘುನಾಥತೀರ್ಥರು ಲಕ್ಷ್ಮೀನಾರಾಯಣನ ಪಾಂಡಿತ್ಯಕ್ಕೆ ಮೆಚ್ಚಿ ಅವನನ್ನು ಶ್ರೀಪಾದರಾಜರೆಂದು ಕರೆದು ಆಶೀರ್ವದಿಸಿದರು. ವಿದ್ಯಾಭ್ಯಾಸ ಮುಗಿಸಿಕೊಂಡು ಪುನಃ ಶ್ರೀರಂಗಕ್ಕೆ ಬಂದ ಶ್ರೀಪಾದರಾಜರು, ಸ್ವರ್ಣವರ್ಣರು ವೃಂದಾವನಸ್ಥರಾದ ಬಳಿಕ ತಾವೇ ಮಠಾಧಿಪತಿಗಳಾದರು. ಅನಂತರ ದೇಶಾಟನೆ ಕೈಗೊಂಡ ಇವರು ಕೋಲಾರ ಜಿಲ್ಲೆಯ ಮುಳಬಾಗಲಿಗೆ ಬಂದು ಅಲ್ಲಿ ತಮ್ಮ ಮಠವನ್ನು ಸ್ಥಾಪಿಸಿ, ಅದನ್ನು ದ್ವೈತಸಿದ್ಧಾಂತದ ಪ್ರಮುಖ ಕೇಂದ್ರವನ್ನಾಗಿ ಮಾಡಿದರು. ಇವರ ಸೋದರ ಬ್ರಹ್ಮಣ್ಯತೀರ್ಥರ ಶಿಷ್ಯರಾಗಿದ್ದ ವ್ಯಾಸರಾಯರು ಮುಳಬಾಗಲಿಗೆ ಬಂದು ಶ್ರೀಪಾದರಾಜರ ಶಿಷ್ಯರಾಗಿ ನಿಂತರು. ಶ್ರೀಪಾದರಾಜರು ಸಾಳುವ ಮನೆತನದ ರಾಜಗುರುಗಳಾಗಿದ್ದರೆಂದೂ ಅಂದಿನ ಅರಾಜಕತೆಯಲ್ಲಿ ಮ್ಲೇಚ್ಛರ ಉಪದ್ರವದಿಂದ ವಿಜಯನಗರಸಾಮ್ರಾಜ್ಯವನ್ನು ರಕ್ಷಿಸಲು ತಕ್ಕ ರಾಜಧರ್ಮ ನೀತಿಯನ್ನೂ ತತ್ತ್ವಜ್ಞಾನದ ಸ್ಫೂರ್ತಿಯನ್ನೂ ರಾಜರಿಗೆ ಉಪದೇಶಿಸಿ ದುಷ್ಟನಿಗ್ರಹ ಶಿಷ್ಟಪರಿಪಾಲನೆ ಮಾಡಲು ತಮ್ಮ ಶಿಷ್ಯರಾದ ವ್ಯಾಸತೀರ್ಥ ರನ್ನು ವಿಜಯನಗರಕ್ಕೆ ಕಳುಹಿಸಿದರೆಂದೂ ವ್ಯಾಸಯೋಗಿ ಚರಿತ ಎಂಬ ಸಂಸ್ಕøತಗ್ರಂಥದಿಂದ ತಿಳಿಯುತ್ತದೆ.

											(ಆರ್.ಎಸ್.ಪಿ.)

	ಶ್ರೀಪಾದರಾಜರು ಸಂಸ್ಕøತ ಮತ್ತು ಕನ್ನಡ ಭಾಷೆಗಳನ್ನು  ಚೆನ್ನಾಗಿ ಬಲ್ಲವರಾಗಿದ್ದು ರಂಗವಿಠಲ ಎಂಬ ಅಂಕಿತದಲ್ಲಿ ಕನ್ನಡದಲ್ಲಿ ಉಗಾಭೋಗ, ಕೀರ್ತನೆ, ಸುಳಾದಿಗಳನ್ನು ರಚಿಸಿದ್ದಾರೆ. ಸಂಸ್ಕøತದಲ್ಲಿ ವಾಗ್ವಜ್ರವೆಂಬ ಕೃತಿ ರಚಿಸಿದ್ದಾರೆ. ಇದು 3,500 ಶ್ಲೋಕಗಳುಳ್ಳ ವ್ಯಾಖ್ಯಾನಗ್ರಂಥ. ಇದರಲ್ಲಿ ಶ್ರೀನ್ಯಾಯಸುಧೆಯ ಜಟಿಲವಾದ ವಿಷಯಗಳನ್ನು ತರ್ಕಶೈಲಿಯಲ್ಲಿ ಸ್ವಾರಸ್ಯವಾಗಿ  ರಚಿಸಿದ್ದಾರೆ. ಇವರ 82 ಕೀರ್ತನೆಗಳು, 3 ಸುಳಾದಿಗಳು, 15 ಉಗಾಭೋಗಗಳು ಮತ್ತು ಒಂದು ದಂಡಕ ಉಪಲಬ್ಧವಿವೆ.  ಇವನ್ನು ಆತ್ಮಶೋಧನೆಯನ್ನೊಳಗೊಂಡ, ದ್ವೈತತತ್ತ್ವಪ್ರತಿಪಾದಕ, ದೈವಭಕ್ತಿನಿರೂಪಣಾತ್ಮಕ ಮತ್ತು ನೀತಿಬೋಧನಾತ್ಮಕ ಕೃತಿಗಳು ಎಂದು ವಿಂಗಡಿಸಬಹುದು. ಭಕ್ತ ಚೇತನವೊಂದು ಭಗವಂತನ ಅನುಗ್ರಹ ಕ್ಕಾಗಿ ನಾನಾ ರೀತಿಯಲ್ಲಿ ಹಂಬಲಿಸುವುದನ್ನು ಇವರ ಆತ್ಮಶೋಧಕ ಕೃತಿಗಳಲ್ಲಿ ಕಾಣಬಹುದಾಗಿದೆ.

	ಶ್ರೀಹರಿಯನ್ನು ಕುರಿತ ಇವರ ಭಕ್ತಿ ಪಂಚವಿಧ ಭಾವಗಳಲ್ಲಿ (ಮಧುರ, ಸಖ್ಯ, ವಾತ್ಸಲ್ಯ, ದಾಸ್ಯ, ಶಾಂತ) ವ್ಯಕ್ತವಾಗಿದೆ. ಅವುಗಳಲ್ಲಿ ವಾತ್ಸಲ್ಯ ಹಾಗೂ ಮಧುರ ಭಾವಗಳು ವಿಶೇಷವಾಗಿವೆ. ಕೃಷ್ಣನನ್ನು ಮಗು ಎಂದು ಭಾವಿಸಿ ಪೋಪು ಹೋಗೋಣ ಬಾರೋ ರಂಗ ಎಂದು ಕರೆಯುವಲ್ಲಿ, ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ, ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಎಂದು ಕೇಳುವಲ್ಲಿ, ಮಗುವನ್ನು ಕುರಿತ ತಾಯಿಯ ಅಂತರಂಗದ ತಳಮಳ ವ್ಯಕ್ತವಾಗಿದೆ. ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ ಎಂದು ಪ್ರಾರಂಭವಾಗುವ ಮಧುರಭಾವದ ಕೀರ್ತನೆಯಲ್ಲಿ ಕೃಷ್ಣನ ವೇಣುಗಾನಕ್ಕೆ ಮೋಹಿತರಾಗಿ ಕೊಳಲಿನ ಕರೆಯತ್ತ ಧಾವಿಸಿದ ಗೋಪಿಕಾಸ್ತ್ರೀಯರ ಚಿತ್ರಣ ಸುಂದರವಾಗಿ ಮೂಡಿಬಂದಿದೆ.

	ಸಂಸಾರದ ಕೋಟಲೆ ಗೋಪಿಯರ ವಿರಹಭಾವನೆಗಳು ಇವರ ಸುಳಾದಿಯ ವಸ್ತುಗಳಾದರೆ, ಭಕ್ತಿ ಹಾಗೂ ಭಕ್ತರ ಶ್ರೇಷ್ಠತೆಯನ್ನು ಇವರ ಉಗಾಭೋಗಗಳು ಬಿಂಬಿಸುತ್ತವೆ. ಇವುಗಳೊಂದಿಗೆ ವೃತ್ತನಾಮ (ಒಂದು ಪದ, ಒಂದು ಶ್ಲೋಕ - ಹೀಗೆ ಮುಂದುವರಿಯುವ ರಚನೆ) ಮತ್ತು ದಂಡಕಗಳನ್ನೂ ಹೆಸರಿಸಬಹುದು. ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆ ಏನು ಪಥವಮ್ಮ ನಮಗೆ ಎಂದು ಪ್ರಾರಂಭವಾಗಿ ಬಿಲ್ಲಹಬ್ಬಕ್ಕಾಗಿ ಕೃಷ್ಣ ಮಧುರೆಗೆ ಹೋಗುವ ಸುದ್ದಿಯನ್ನು ಕೇಳಿದ ಗೋಪಿಯರ ಕಳವಳ, ಆತಂಕಗಳನ್ನು ಇವರು ತಮ್ಮ ವೃತ್ತನಾಮದಲ್ಲಿ ಚಿತ್ರಿಸಿದ್ದಾರೆ. ಈ ವೃತ್ತನಾಮ ಪಲ್ಲವಿ, ಅನುಪಲ್ಲವಿ, ಮೂರು ನುಡಿಗಳು, ಅನಂತರ ಒಂದು ಶ್ಲೋಕ, ಒಂದು ನುಡಿ - ಹೀಗೆ ಒಟ್ಟು ಹನ್ನೆರಡು ನುಡಿಗಳ ವಿಸ್ತಾರದಲ್ಲಿದೆ.

	ದಂಡಕದ ರಚನೆ ದಾಸಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ. ಇವರು ಸಂಸ್ಕøತದ ಈ ಛಂದೋಮಟ್ಟನ್ನು ಕನ್ನಡಕ್ಕೆ ಸಶಕ್ತವಾಗಿ ತಂದಿದ್ದಾರೆ.

	ಇವರ ಕೃತಿಗಳನ್ನು ಒಟ್ಟಾರೆ ಪರಿಶೀಲಿಸಿದಲ್ಲಿ ಎಲ್ಲ ಕೃತಿಗಳೂ (ದಂಡಕವೊಂದನ್ನು ಬಿಟ್ಟು) ಸಂಗೀತದ ತಳಹದಿಯ ಮೇಲೆ ರಚಿತವಾಗಿವೆ. ಕೀರ್ತನೆಗಳು ರಾಗ-ತಾಳಸಹಿತವಾದವು. ಸರಳ ಭಾಷೆಯ ಬಳಕೆ ಇವರ ಕೃತಿಗಳಿಗೆ ಲಾಲಿತ್ಯವನ್ನು ಒದಗಿಸಿದೆ. ಆಡುಭಾಷೆಯನ್ನು ಕೂಡ ಶ್ರೀಪಾದರಾಜರು ತಮ್ಮ ಕೃತಿಗಳಲ್ಲಿ ಔಚಿತ್ಯಪೂರ್ಣವಾಗಿ ಅಳವಡಿಸಿದ್ದಾರೆ.

	ಇವರ ಭ್ರಮರಗೀತ ರಗಳೆಯ ಬಂಧದಲ್ಲಿ ರಚಿತವಾಗಿದ್ದು ಪಲ್ಲವಿ, ಅನುಪಲ್ಲವಿ ಮತ್ತು 9 ಚರಣಗಳಿಂದ ಕೂಡಿದೆ. ಇವರು ಈ ಗೀತೆಗಳನ್ನು (ಜೊತೆಗೆ ವೇಣುಗೀತ ಮತ್ತು ಗೋಪಿಗೀತಗಳನ್ನು) ಪೂಜಾಕಾಲದಲ್ಲಿ ಹಾಡಿಸುತ್ತಿದ್ದರಂತೆ.

	ಸಾಹಿತ್ಯ ದೃಷ್ಟಿಯಿಂದ ಹರಿದಾಸರ ಪೈಕಿ ಪ್ರಮುಖರಾದ ಶ್ರೀಪಾದ ರಾಜರ ಕೃತಿರಚನೆಯಲ್ಲಿಯ ವೈವಿಧ್ಯ ಮುಂದಿನ ದಾಸಪೀಳಿಗೆಯವರಿಗೆ ಆದರ್ಶವಾಯಿತು. ದಾಸಕೂಟಕ್ಕೆ ಹೊಸ ಕಳೆ ತಂದುಕೊಟ್ಟಿತು. ಕೀರ್ತನೆ, ಸುಳಾದಿ, ಉಗಾಭೋಗಗಳ ರಚನೆ, ಅವುಗಳಲ್ಲಿಯ ಪಂಚವಿಧ ಭಾವಗಳು, ದಶಾವತಾರದ ವರ್ಣನೆ, ಲೋಕನೀತಿ, ಆತ್ಮವಿಮರ್ಶೆ ಇತ್ಯಾದಿಗಳ  ಚಿತ್ರಣ ಹರಿದಾಸ ಸಾಹಿತ್ಯದಲ್ಲಿ ಒಂದು ಪರಂಪರೆಯಾಗಿ ಉಳಿದುಬಂತು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		